ದುಬೈ: ನ್ಯೂಜಿಲೆಂಡ್‌ಗೆ ದುಬೈಯಿಂದ ಹೊರಟಿದ್ದ ಎಮಿರೇಟ್ಸ್ ವಿಮಾನ 13 ಗಂಟೆಗಳ ಕಾಲ ಹಾರಾಟ ನಡೆಸಿದ ಬಳಿಕ ಮತ್ತೆ ದುಬೈ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್ ಆಗಿರುವ ವಿಚಿತ್ರ ಘಟನೆ ನಡೆದಿದೆ. ಫಾಕ್ಸ್ ನ್ಯೂಸ್ ವರದಿಯ ಪ್ರಕಾರ EK448 ವಿಮಾನವು ಶುಕ್ರವಾರ ದುಬೈ ಸ್ಥಳೀಯ ಕಾಲಮಾನ ಬೆಳಗ್ಗೆ ಸುಮಾರು 10:30 ಕ್ಕೆ ಟೇಕ್ ಆಫ್ ಆಗಿತ್ತು.
ಪೈಲಟ್ ಸುಮಾರು 9 ಸಾವಿರ ಮೈಲಿ ಪ್ರಯಾಣವನ್ನು ಪೂರೈಸದೆ ಅರ್ಧ ದಾರಿಯಲ್ಲೇ ಯು-ಟರ್ನ್ ಮಾಡಿದ್ದಾರೆ.
ಇದಕ್ಕೆ ಕಾರಣ ಏನೆಂದರೆ ಈ ವಿಮಾನ ಹೋಗಬೇಕಿದ್ದ ನ್ಯೂಜಿಲೆಂಡ್‌ನ ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ತೀವ್ರ ಪ್ರವಾಹ ಉಂಟಾಗಿತ್ತು. ಆದ್ದರಿಂದ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಇದರಿಂದಾಗಿ ಎಮಿರೇಟ್ಸ್ ವಿಮಾನ ಪುನಃ ದುಬೈಗೆ ವಾಪಸಾಗಬೇಕಾಯಿತು.
ಇನ್ನು, ಆಕ್ಲೆಂಡ್ ವಿಮಾನ ನಿಲ್ದಾಣ ಮುಚ್ಚಿರುವ ಬಗ್ಗೆ ಆಕ್ಲೆಂಡ್ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಇದು ಅತ್ಯಂತ ಹತಾಶಕರ ಪರಿಸ್ಥಿತಿ, ಆದರೆ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಮುಖ್ಯವಾಗಿದೆ. ಪ್ರಯಾಣಿಕರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.