Spread the love

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದು, ಇಷ್ಟಾದರೂ ಸಹ ರಾಜ್ಯದಾದ್ಯಂತ ಇರುವ ಅವರ ಅಭಿಮಾನಿಗಳು ತಮ್ಮ ಕ್ಷೇತ್ರಕ್ಕೆ ಬಂದು ಸ್ಪರ್ಧಿಸುವಂತೆ ಆಹ್ವಾನ ನೀಡುತ್ತಿರುವುದು ನಿಂತಿಲ್ಲ.

ಕೆಲ ದಿನಗಳ ಹಿಂದೆ ಯಾದಗಿರಿಯ ಬಿಜೆಪಿ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯನವರು ಈ ಕ್ಷೇತ್ರದಿಂದ ಕಣಕ್ಕಿಳಿದರೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದರಲ್ಲದೆ, ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿ 50 ರಿಂದ 60 ಸಾವಿರ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಘೋಷಿಸಿದ್ದರು.

ಅದಾದ ಬಳಿಕ ಸಿದ್ದರಾಮಯ್ಯನವರಿಗೆ ಆಫರ್ ನೀಡಿದ್ದ ರಾಯಚೂರಿನ ಮತ್ತೊಬ್ಬ ವ್ಯಕ್ತಿ, ಜಿಲ್ಲೆಯ ಯಾವುದಾದರೂ ಒಂದು ಸಾಮಾನ್ಯ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿದರೆ ತಮ್ಮ ಎರಡು ಎಕರೆ ಹೊಲ ಮಾರಾಟ ಮಾಡಿ ದೇಣಿಗೆ ನೀಡುವುದಾಗಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.

ಇದೀಗ ಚಿಕ್ಕಮಗಳೂರು ಕ್ಷೇತ್ರದ ಅಭಿಮಾನಿ ಮತ್ತೊಂದು ಆಫರ್ ನೀಡಿದ್ದು, ಈ ಕ್ಷೇತ್ರದಿಂದ ಕಣಕ್ಕಿಳಿದರೆ ತಮ್ಮ ಎರಡೂವರೆ ಎಕರೆ ಅಡಿಕೆ ತೋಟ ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಕೆಂಪನಹಳ್ಳಿ ನಿವಾಸಿ ಬಾಲಕೃಷ್ಣ ಈ ಆಹ್ವಾನ ನೀಡಿದ್ದು ಇದಕ್ಕೆ ಅವರ ಕುಟುಂಬ ಸದಸ್ಯರು ಕೂಡ ಸಮ್ಮತಿಸಿದ್ದಾರೆ ಎನ್ನಲಾಗಿದೆ.


Spread the love

By admin