Spread the love

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ, ಮೀಸಲು ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 14ಕ್ಕೆ ಮುಂದೂಡಿದೆ.

 

ಚುನಾವಣಾ ಆಯೋಗದ ವತಿಯಿಂದ ಸಲ್ಲಿಸಲಾದ ಅರ್ಜಿ ವಿಚಾರಣೆ ಹಿರಿಯ ನ್ಯಾ. ಅಲೋಕ್ ಅರಾಧೆ, ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ವಿಭಾಗಿಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತು. ಸರ್ಕಾರಿ ವಕೀಲರು, ರಾಜ್ಯದ ಪರ ಅಡ್ವೋಕೇಟ್ ಜನರಲ್ ವಾದ ಮಂಡಿಸಬೇಕಿದ್ದು, ಕಾಲಾವಕಾಶ ನೀಡಬೇಕೆಂದು ಕೋರಿದ್ದಾರೆ.

ನ್ಯಾಯಪೀಠ ಇದನ್ನು ಪರಿಗಣಿಸಿದ್ದು ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿದೆ. ಸಬೂಬು ಹೇಳಿಕೊಂಡು ಕಾಲದೂಡುತ್ತ ವಿಳಂಬ ಮಾಡುತ್ತಿರುವ ಸರ್ಕಾರಕ್ಕೆ ಚಾಟಿ ಬೀಸಿದ್ದ ಹೈಕೋರ್ಟ್ 5 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲು ನಿಗದಿ ಮಾಡುವ ಪ್ರಕ್ರಿಯೆಯನ್ನು 2023ರ ಫೆಬ್ರವರಿ 1 ರೊಳಗೆ ಪೂರ್ಣಗೊಳಿಸಲು ಹೈಕೋರ್ಟ್ ಗಡುವು ನೀಡಿ 2022ರ ಡಿಸೆಂಬರ್ 14ರಂದು ಆದೇಶ ಹೊರಡಿಸಿತ್ತು. ಅಲ್ಲದೆ ವಿಚಾರಣೆಯನ್ನು 2023ರ ಫೆಬ್ರವರಿ 2 ಕ್ಕೆ ಮುಂದೂಡಲಾಗಿತ್ತು. ನಂತರದಲ್ಲಿ ಅರ್ಜಿ ವಿಚಾರಣೆ ಎರಡು ಸಲ ಮುಂದೂಡಿಕೆಯಾಗಿದೆ.


Spread the love

By admin