12 ನೇ ತರಗತಿ ವಿದ್ಯಾರ್ಥಿನಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಬಳಿಕ ರೈಲ್ವೆ ಹಳಿ ಬಳಿ ಶವವಾಗಿ ಪತ್ತೆಯಾಗಿರೋ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭಾನುವಾರ ವಿದ್ಯಾರ್ಥಿನಿಯ ಮೇಲೆ ಗುಂಡು ಹಾರಿಸಿದ 22 ವರ್ಷದ ಆರೋಪಿ ಗುನಾ ಜಿಲ್ಲೆಯ ರೈಲ್ವೆ ಹಳಿಯ ಬಳಿ ಶವವಾಗಿ ಪತ್ತೆಯಾಗಿದ್ದ.
ವಿದ್ಯಾರ್ಥಿನಿಯ ಕೈಗೆ ಗಾಯವಾಗಿದ್ದು 17 ವರ್ಷದ ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಹುಲ್ ಕುಶ್ವಾಹ ಎಂದು ಗುರುತಿಸಲಾದ ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್ಪಿ) ಶ್ವೇತಾ ಗುಪ್ತಾ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕುಶ್ವಾಹಾ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕುಶ್ವಾಹಾ, ನಜುಲ್ ಪ್ರದೇಶದಲ್ಲಿ ಇರುವ ಶಾಲೆಯನ್ನ ಸಂಜೆ 4 ಗಂಟೆಗೆ ತಲುಪಿದ್ದ. ಅಲ್ಲಿ ವಿದ್ಯಾರ್ಥಿಗಳಿಗೆ ವಿದಾಯ ಕೂಟ ನಡೆಯುತ್ತಿತ್ತು. ಆತ ಹುಡುಗಿಯನ್ನು ಹೊರಗೆ ಕರೆದು ತನ್ನೊಂದಿಗೆ ಮಾತನಾಡಲು ಒತ್ತಾಯಿಸಿದ್ದಾನೆ.
ಆಕೆ ನಿರಾಕರಿಸಿದಾಗ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಅವಳ ಮೇಲೆ ಗುಂಡು ಹಾರಿಸಿದ್ದ. ಆದರೆ ಗುಂಡು ಗುರಿ ತಪ್ಪಿದರೂ ಗುಂಡಿನ ಚೂರು ಬಾಲಕಿಯ ಕೈಗೆ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕೆಲವು ಗಂಟೆಗಳ ನಂತರ, ಕುಶ್ವಾಹಾ, ದೇಹವು ಗುನಾ ಜಿಲ್ಲಾ ಕೇಂದ್ರದಿಂದ ಸುಮಾರು 8 ಕಿಮೀ ದೂರದಲ್ಲಿರುವ ಮಹುಗರ್ಹಾ ರೈಲು ನಿಲ್ದಾಣದ ಸಮೀಪವಿರುವ ರೈಲ್ವೆ ಹಳಿ ಬಳಿ ಬಿದ್ದಿರುವುದು ಕಂಡುಬಂತು. ಈ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.