Spread the love

ಬೆಂಗಳೂರು : ”ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ರಾಜ್ಯಾದ್ಯಂತ 28 ಸಾವಿರ ದ್ವಿಚಕ್ರವಾಹನ ನೀಡುವ ಗುರಿ ಹೊಂದಲಾಗಿದೆ” ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ವಿಡಿಯೋ ಸಂವಾದ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಸ್ಥ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತಿದ್ದು, ಫಲಾನುಭವಿಗಳನ್ನು ಶೀಘ್ರವೇ ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಯೋಜನೆ ಅನುಷ್ಠಾನಕ್ಕಾಗಿ 210 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ದ್ವಿಚಕ್ರ ವಾಹನ ವಿತರಣೆ ಗುರಿ ಹೊಂದಲಾಗಿದೆ. ಮೀನು ಮಾರಾಟ, ಬಟ್ಟೆ ವ್ಯಾಪಾರ ಸೇರಿದಂತೆ ಸರಕು ದ್ವಿಚಕ್ರ ವಾಹನಗಳಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಅರ್ಹ ಫಲಾನುಭವಿಗಳು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ದ್ವಿಚಕ್ರ ವಾಹನಕ್ಕೆ 70 ಸಾವಿರ ರೂ. ನಿಗದಿಗೊಳಿಸಲಾಗಿದ್ದು 50 ಸಾವಿರ ರೂ. ಸಬ್ಸಿಡಿ ಹಾಗೂ 20 ಸಾವಿರ ರೂ. ಬ್ಯಾಂಕ್ ಸಾಲ ಸೌಲಭ್ಯ ಇರಲಿದೆ. ಫಲಾನುಭವಿ ತಮಗೆ ಅನುಕೂಲವಾಗುವ ಯಾವುದೇ ಕಂಪನಿಯ ದ್ವಿಚಕ್ರ ವಾಹನ ಖರೀದಿಸಬಹುದು ಎಂದರು.

ಈಗಾಗಲೇ ಆನ್ ಲೈನ್ ಮೂಲಕ ಆಹ್ವಾನಿಸಲಾದ ಅರ್ಜಿಗಳಲ್ಲಿ ಈವರೆಗೆ 8432 ಅರ್ಜಿಗಳು ಬಂದಿದ್ದು ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ ಸುತ್ತೋಲೆ ಕಳಿಸುವಂತೆ ಹಾಗೂ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅವರು ತಿಳಿಸಿದರು.


Spread the love