ಉಡುಪಿ ಜಿಲ್ಲೆಯ ಕಾಪು ಬಳಿಯ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ, ‘ಸುಗ್ಗಿ ಮಾರಿ ಪೂಜೆ’ ಜಾತ್ರೆಯು ಬಿಜೆಪಿ ಬೆಂಬಲಿತ ಸಂಘಪರಿವಾರದ ಸಂಘಟನೆಗಳ ಬೆದರಿಕೆಯ ನಡುವೆಯು ಸಾಂಗಾವಾಗಿ ನಡೆದು ಸಂಪನ್ನಗೊಂಡಿದೆ. ಈ ನಡುವೆ ದೇವಸ್ಥಾನದ ವಠಾರದಲ್ಲಿ ಅಂಗಡಿಯನ್ನು ಇಟ್ಟಿದ್ದ ಸಂಘಪರಿವಾದ ಕಾರ್ಯಕರ್ತರು ಮಾರುಕಟ್ಟೆ ಬೆಲೆಗಿಂತಲೂ ದುಪ್ಪಟ್ಟು ಬೆಲೆಗೆ ಕೋಳಿ ಮತ್ತು ಮಲ್ಲಿಗೆ ಹೂವುಗಳನ್ನು ಮಾರಿದ್ದು, ಭಕ್ತಾದಿಗಳನ್ನು ವಂಚಿಸಿದ್ದಾರೆ ಎಂದು ವರದಿಯಾಗಿದೆ.
ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಸಂಘಪರಿವಾರ ಮುಸ್ಲಿಮರ ವಿರುದ್ಧ ದ್ವೇಷ ಹರಡಿ, ಕೋಮು ಸೌಹಾರ್ದವನ್ನು ಹಾಳುಗೆಡವಿತ್ತು. ಆದರೆ ಜಾತ್ರೆಗೆ ಬಂದಿದ್ದ ಭಕ್ತಾದಿಗಳು ಸಂಘಪರಿವಾದ ಬೆದರಿಕೆಗಳಿಗೆ ಸೊಪ್ಪು ಹಾಕದೆ ಮುಸ್ಲಿಂ ವ್ಯಾಪಾರಿಗಳೊಂದಿಗೆ ವ್ಯಾಪಾರ ಮಾಡಿದ್ದು, ಜಾತ್ರೆಯ ‘ವಾಲಗ ಚಾಕರಿ’ಯನ್ನು ಸಂಪ್ರದಾಯದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಗಳೆ ಎರಡು ದಿನದ ವಾಲಗ ಊದಿ ‘ತುಳುನಾಡಿನ ಪರಂಪರೆ’ಯನ್ನು ಎತ್ತಿಹಿಡಿದಿದ್ದಾರೆ.
ಮಾರಿಗುಡಿ ವಾರ್ಷಿಕ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಸಂಘಪರಿವಾರವು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪುರಸಭೆಗೆ ಒತ್ತಡ ಹೇರಿತ್ತು. ದೇವಸ್ಥಾನದ ಆಡಳಿತ ಮಂಡಳಿ ಸಂಘಪರಿವಾರದ ಬೆದರಿಕೆಗಳಿಗೆ ಜಗ್ಗಿ ದೇವಸ್ಥಾನದ ವಠಾರದಲ್ಲಿ ಮುಸ್ಲಿಮರಿಗೆ ಯಾವುದೆ ಅಂಗಡಿ ಮುಂಗ್ಗಟ್ಟುಗಳನ್ನು ನೀಡಿರಲಿಲ್ಲ. ಆದರೆ ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಅವರು, “ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಎಲ್ಲ ಸಮುದಾಯದ ವರ್ತಕರು ಅಂಗಡಿಗಳನ್ನು ತೆರೆಯಬಹುದಾಗಿದೆ” ಎಂದು ಹೇಳಿದ್ದರು.
ಅದರಂತೆ ದೇವಸ್ಥಾನದ ವಠಾರದಲ್ಲಿ ಅವಕಾಶ ನೀಡದ್ದರಿಂದ ಅಲ್ಲಿ ಯಾವುದೆ ಮುಸ್ಲಿಮರ ಅಂಗಡಿಗಳು ಇರಲಿಲ್ಲ. ಆದರೆ ಹೊರಗಡೆಯ ಸಾವರ್ಜನಿಕ ಸ್ಥಳಗಳಲ್ಲಿ ಮುಸ್ಲಿಮರು ತಮ್ಮ ಅಂಗಡಿಗಳಲ್ಲಿ ಕೋಳಿ ಮತ್ತು ಇತರ ವಸ್ತುಗಳನ್ನು ಇಟ್ಟು ಮಾರಾಟ ಮಾಡಿದ್ದರು. ಅವರೊಂದಿಗೆ ಜಾತ್ರೆಗೆ ಆಗಮಿಸಿದ್ದ ಭಕ್ತರು ವ್ಯಾಪಾರವನ್ನೂ ಮಾಡಿದ್ದರು. ಆದರೆ, ದೇವಸ್ಥಾನದ ಬಳಿಯಲ್ಲಿ ಕೋಳಿ ಮತ್ತು ಮಲ್ಲಿಗೆ ಅಂಗಡಿಗಳನ್ನು ಇಟ್ಟಿದ್ದ ಸಂಘಪರಿವಾರದ ಕಾರ್ಯಕರ್ತರು ಪರಿಸ್ಥಿತಿಯ ಲಾಭವನ್ನು ಪಡೆದು ಭಕ್ತಾದಿಗಳನ್ನು ವಂಚಿಸಿದ್ದಾರೆ ಎಂದು ಆರೋಪಗಳು ಎದ್ದಿದೆ.ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸ್ಥಳೀಯ ಪತ್ರಕರ್ತರೊಬ್ಬರು, “ಮಾರಿ ಪೂಜೆಗೆ ಕೋಳಿ ಮತ್ತು ಮಲ್ಲಿಗೆ ಬಹಳ ಮುಖ್ಯವಾಗಿ ಬೇಕಾದ ವಸ್ತುಗಳಾಗಿವೆ. ಸಂಘಪರಿವಾರವು ಪರಿಸ್ಥಿಯನ್ನು ಬಿಗಡಾಯಿಸುವಂತೆ ಮಾಡಿ ಅದನ್ನು ಲಾಭ ಮಾಡಿಕೊಂಡು ಭಕ್ತಾದಿಗಳನ್ನು ವಂಚಿಸಿದೆ. ಈ ವಂಚನೆಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.“ನಾನು ಪೂಜೆಗೆ ಹೋದಾಗ ದೇವಸ್ಥಾನದ ಬಳಿಯ ಸಂಘಪರಿವಾರದ ಕಾರ್ಯಕರ್ತರ ಅಂಗಡಿಗಳಲ್ಲಿ ನಾಟಿ ಕೋಳಿಗೆ ಒಂದು ಕೆ.ಜಿ.ಗೆ 400 ರೂ.ಗಳಿಗೆ ಮಾರುತ್ತಿದ್ದರು. ಆದರೆ ಮುಸ್ಲಿಮರ ಅಂಗಡಿಗಳಲ್ಲಿ 1 ಕೆ.ಜಿ. ನಾಟಿ ಕೋಳಿಗೆ 250 ರೂ.ಗಳು ಇತ್ತು. ಅಲ್ಲದೆ ಅದನ್ನು ಕೊಯ್ದು ಕೊಡಲು ಸಂಘಪರಿವಾದ ಅಂಗಡಿಗಳಲ್ಲಿ ಹೆಚ್ಚುವರಿಯಾಗಿ 50 ರಿಂದ 75 ರೂ.ಗಳ ವರೆಗೆ ಪಾವತಿಸಬೇಕಾಗಿತ್ತು. ಆದರೆ ಮುಸ್ಲಿಮರ ಅಂಗಡಿಗಳಲ್ಲಿ ಇದಕ್ಕೆ ಯಾವುದೆ ಹೆಚ್ಚುವರಿ ಹಣವನ್ನು ಪಡೆದುಕೊಳ್ಳುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಮಲ್ಲಿಗೆ ವ್ಯಾಪಾರದ ವಿಚಾರದಲ್ಲೂ ಸಂಘಪರಿವಾರದ ಕಾರ್ಯಕರ್ತರು ಹೀಗೆ ನಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಮುಸ್ಲಿಮರ ಜೊತೆಗೆ ವ್ಯಾಪಾರ ಮಾಡಬಾರದು ಎಂದು ಭಕ್ತಾದಿಗಳನ್ನು ಉದ್ರಿಕ್ತಗೊಳಿಸಲು ಸಂಘಪರಿವಾರವು ಪ್ರಯತ್ನಿಸಿದರೂ, ಭಕ್ತಾದಿಗಳು ಅದಕ್ಕೆ ಯಾವುದೆ ಸೊಪ್ಪು ಹಾಕಿಲ್ಲ. ದೇವಸ್ಥಾನದ ಹೊರಗಡೆ ಇದರ ಯಾವುದೆ ಪರಿವೆ ಇಲ್ಲದೆ ಭಕ್ತಾದಿಗಳು ಎಲ್ಲರೊಂದಿಗೂ ವ್ಯಾಪಾರದಲ್ಲಿ ತೊಡಗಿದ್ದರು ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಸಾವಿರಾರು ವರ್ಷಗಳ ಸಂಪ್ರದಾಯದಂತೆ ಮಾರಿ ಗುಡಿಯ ಜಾತ್ರೆಯ ಎರಡು ದಿನಗಳಲ್ಲೂ ವಾಲಗವನ್ನು ಮುಸ್ಲಿಂ ಸಮುದಾಯದ ವ್ಯಕ್ತಿಗಳೇ ಊದಿದ್ದಾರೆ ಎಂದು ವರದಿಯಾಗಿದೆ. ಕಾಪು ಹೊಸ ಮಾರಿಗುಡಿ, ಮೂರನೇ ಮಾರಿಗುಡಿ ಮತ್ತು ಜನಾರ್ಧನ ದೇವಸ್ಥಾನದಲ್ಲಿ ತಲತಲಾಂತರದಿಂದ ವಾಲಗ ಊದುವ ‘ಚಾಕರಿ’ ಮಾಡಿಕೊಂಡು ಬರುತ್ತಿರುವ ಮುಸ್ಲಿಂ ಕುಟುಂಬದ ಜಲೀಲ್ ಸಾಹೇಬ್ ಅವರು ಮಾರಿಗುಡಿಯ ಈ ಬಾರಿಯ ಜಾತ್ರೆಯಲ್ಲಿ ವಾಲಗ ಊದಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಲೀಲ್ ಸಾಹೇಬ್, “ನಾವು ‘ಜನಾರ್ದನ ದೇವಸ್ಥಾನ’, ‘ಮೂರನೇ ಮಾರಿಗುಡಿ’ ಮತ್ತು ‘ಹೊಸ ಮಾರಿಗುಡಿ’ ದೇವಸ್ಥಾನಗಳಿಗೂ ತಲತಲಾಂತರದಿಂದಲೂ ವಾಲಗ ಚಾಕರಿ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮದು ಸಾವಿರಾರು ವರ್ಷಗಳ ಪರಂಪರೆ, ನನ್ನ ತಂದೆ, ಅಜ್ಜ, ಅವರ ಅಜ್ಜ ಹೀಗೆ…ವಾಲಗ ಚಾಕರಿ ಮಾಡುತ್ತಲೆ ಬರುತ್ತಿದ್ದೇವೆ. ಈ ವರ್ಷ ಕೂಡಾ ವಾಲಗ ಊದಿ ಚಾಕರಿ ಮಾಡಿದ್ದೇವೆ. ನಮ್ಮನ್ನು ಯಾರೂ ಬರಬೇಡಿ ಎಂದು ಹೇಳಿಲ್ಲ” ಎಂದು ಹೇಳಿದ್ದಾರೆ.
ಕೋವಿಡ್-19 ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಮೂರು ದೇವಸ್ಥಾನಗಳಲ್ಲಿ ವಾರ್ಷಿಕ ಜಾತ್ರೆ ನಡೆದಿರಲಿಲ್ಲ ಮತ್ತು ಹರಾಜು ಕೂಡ ನಡೆದಿರಲಿಲ್ಲ. ಈ ಹಿಂದೆ ದೇವಸ್ಥಾನದ ವಠಾರದಲ್ಲಿ ಜಾತ್ರೆಯ ಸಂತೆ ಇಡಲು ಸ್ಥಳಗಳನ್ನು ಮುಸ್ಲಿಮರು ಕೂಡಾ ಪಡೆಯುತ್ತಿದ್ದರು ಎಂದು ಹೇಳಿದರು.