Spread the love

ಕಾರವಾರ: ಹಿಜಾಬ್ ಗಲಾಟೆ ವೇಳೆ ಮಂಡ್ಯದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಮುಸ್ಕಾನ್ ‘ಅಲ್ಲಹು ಅಕ್ಬರ್’ ಅಂತ ಘೋಷಣೆ ಕೂಗಿದ್ದಳು. ಇದು ರಾಜ್ಯವಲ್ಲ ಇಡೀ ವಿಶ್ವದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಜೊತೆಗೆ ಇತ್ತೀಚೆಗೆ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಜವಾಹಿರಿ ವಿದ್ಯಾರ್ಥಿನಿ ಮುಸ್ಕಾನ್ ಬಗ್ಗೆ ಹೊಗಳಿದ್ದಾನೆ. ಉಗ್ರ ಸಂಘಟನೆಯ ಮುಖ್ಯಸ್ಥನ ವಿಡಿಯೋ ಹೇಳಿಕೆ ಬಿಡುಗಡೆಯಾಗುತ್ತಿದ್ದಂತೆ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಮುಸ್ಕಾನ್ ವಿರುದ್ಧ ತನಿಖೆ ನಡೆಯಬೇಕು ಎಂಬ ಕೂಗುಗಳು ಕೇಳಿ ಬರುತ್ತಿವೆ. ಈ ನಡುವೆ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಮುಸ್ಕಾನ್ ವಿರುದ್ಧ ತನಿಖೆ ಮಾಡಿ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.


ವಿದ್ಯಾರ್ಥಿನಿ ವಿರುದ್ಧ ತನಿಖೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿರುವ ಅನಂತಕುಮಾರ ಹೆಗಡೆ, ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಜವಾಹಿರಿ ಮುಸ್ಕಾನಳನ್ನು ಹೊಗಳಿದ್ದಾನೆ. ಈ ಕುರಿತು ತನಿಖೆ ಆಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಅನಂತ್ ಕುಮಾರ್ ಹೆಗಡೆ ಬಳಿ ಚರ್ಚೆ ಮಾಡುತ್ತೇನೆ. ಅನಂತ್ ಕುಮಾರ್ ಬಳಿ ಇರುವ ಮಾಹಿತಿ ಮೇಲೆ ಕೈಗೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ತನಿಖೆ ಮಾಡಿದರೆ ತಪ್ಪೇನಿಲ್ಲ. ತನಿಖೆ ಆಗಿ ನಿಜ ಹೊರಗೆ ಬರಬೇಕು. ಮಂಡ್ಯ ಹಾಗೂ ರಾಜ್ಯದಲ್ಲಿ ವಾತಾವರಣ ಶಾಂತಿಯುತವಾಗಿದೆ. ರಾಜಕೀಯವಾಗಿ ಮಾತಾಡಿ ವಾತಾವರಣ ಕೆಡೆಸುವ ಕೆಲಸ ಮಾಡಬಾರದು. ಈ ಸಂದರ್ಭದಲ್ಲಿ ಎಲ್ಲಾ ಸಮಾಜಗಳು ಒಂದಾಗಿ, ಈ ಸಮಸ್ಯೆ ಬಗೆಹರಿಸಬೇಕು. ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಯಾರೋ ಹೇಳಿಕೆಯಿಂದ ಬಲಿಪಶು ಆಗೋದು ಬಡವರು. ಈ ರೀತಿ ಯಾರು ಕೂಡ ಮಾಡಬಾರದು ಎಂದರು.


Spread the love