ಚಿತ್ರದುರ್ಗ: ಒಂದು ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಮೊಳಕಾಲ್ಮೂರು ಪಟ್ಟಣದ ಹಳೆಯ ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ನಿರ್ಮಿಸಲಾಗುತ್ತಿರುವ ಮೊಳಕಾಲ್ಮುರು ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಬಳ್ಳಾರಿ ಜನ್ಮ ಭೂಮಿ, ರಾಜಕೀಯವಾಗಿ ಪುನರ್ಜನ್ಮ ನೀಡಿದ ಮೊಳಕಾಲ್ಮೂರು ಕ್ಷೇತ್ರ ನನ್ನ ಕರ್ಮಭೂಮಿ. ಮೊಳಕಾಲ್ಮೂರು ನನಗೆ ಪವಿತ್ರ ಸ್ಥಳ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ. ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಶೀಘ್ರ:ಸಾರಿಗೆ ನೌಕರರಿಗೆ 7ನೇ ವೇತನ ಜಾರಿಗೆ ಕಷ್ಟವಾಗಬಹುದು. ಆದರೆ ವೇತನ ಪರಿಷ್ಕರಣೆಗೆ ಈಗಾಗಲೇ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಲಾಗಿದ್ದು, ಆದಷ್ಟು ಶೀಘ್ರದಲ್ಲಿ ವೇತನ ಪರಿಷ್ಕರಣೆ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಾರಿಗೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇಲಾಖೆಯ ಚಾಲಕರು, ನಿರ್ವಾಹಕರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಅವರ ಬಹಳ ದಿನ ಬೇಡಿಕೆಯಾದ 7ನೇ ವೇತನ ಆಯೋಗ ಜಾರಿ, ವೇತನ ಪರಿಷ್ಕರಣೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ನೌಕರರಿಗೆ ಯಾವುದೇ ತೊಂದರೆಯಾಗಬಾರದೆಂದು ಮುಖ್ಯಮಂತ್ರಿಗಳು 6 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಮುಷ್ಕರದಲ್ಲಿ ಪಾಲ್ಗೊಂಡ ಸಸ್ಪೆಂಡ್ ಹಾಗೂ ಡಿಸ್ ಮಿಸ್ ಆದವರನ್ನೂ ಪುನಃ ನೇಮಕ ಮಾಡಿಕೊಳ್ಳುವ ಕೆಲಸ ಮಾಡಲಾಗಿದೆ ಎಂದರು.
ಇಲಾಖೆಯು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿಯೂ 4 ನಿಗಮಗಳಲ್ಲಿ ಸುಮಾರು 3,500 ಬಸ್ ಗಳ ಖರೀದಿ ಮಾಡಲಾಗಿದೆ. 2030ರೊಳಗೆ ಎಲ್ಲ ಹಳೆಯ ಬಸ್ ಗಳನ್ನು ತೆಗೆದು ಸುಮಾರು 28 ಸಾವಿರ ಬಸ್ ಗಳನ್ನು ಖರೀದಿ ಮಾಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.