ಭಾರತೀಯ ಬೌಲರ್ಸ್ ಹೋರಾಟ, ಶ್ರೀಲಂಕಾ ನಾಯಕ ದಸೂನ್ ಶನಕ ಬ್ಯಾಟಿಂಗ್ ಅಂತಿಮ ಹಂತದಲ್ಲಿ ಪಂದ್ಯವನ್ನು ತೀವ್ರ ರೋಚಕತೆಗೆ ಕೊಂಡೊಯ್ದಿತ್ತು. ಅಂತಿಮ ಓವರ್ ಮತ್ತಷ್ಟು ಕುತೂಹಲ ಕೆರಳಿಸಿತು. ಅಂತಿಮ ಹಂತದಲ್ಲಿ ಲಂಕಾದ ಕರುಣಾರತ್ನೆ ಸಿಡಿಸಿ ಎರಡು ಸಿಕ್ಸರ್ ಪಂದ್ಯದ ಗತಿ ಬದಲಿಸುವ ಸೂಚನೆ ನೀಡಿತ್ತು. ಆದರೆ ಕೊನೆಯ ಎಸೆತದಲ್ಲಿ ಭಾರತ 2 ರನ್ ಗೆಲುವು ದಾಖಲಿಸಿತು. ಭಾರತದ ಬೌಲರ್ಸ್ ಪರಾಕ್ರಮದಿಂದ ಲಂಕಾ ತಂಡವನ್ನು160 ರನ್ಗೆ ಕಟ್ಟಿ ಹಾಕಲಾಯಿತು. 163 ರನ್ ಟಾರ್ಗೆಟ್ ಚೇಸ್ ಮಾಡಲು ಶ್ರೀಲಂಕಾ ಸಜ್ಜಾಗಿತ್ತು. ಡ್ಯೂ ಫ್ಯಾಕ್ಟರ್ ಲಾಭ ಕೂಡ ಲಂಕಾಗಿತ್ತು. ಇದೇ ಕಾರಣಕ್ಕೆ ಚೇಸಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಎಲ್ಲಾ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಆದರೆ ಶಿವಂ ಮಾವಿ ಬೆಂಕಿ ದಾಳಿಗೆ ಶ್ರೀಲಂಕಾ ಆರಂಭದಲ್ಲೇ ಪಥುಮ್ ನಿಸಂಕಾ ವಿಕೆಟ್ ಕಳೆದುಕೊಂಡಿತು. ನಿಸಂಕ 1 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಧನಂಜಯ ಡಿಸಿಲ್ವ ವಿಕೆಟ್ ಪತನಗೊಂಡಿತು. ಧನಂಜಯ 8 ರನ್ ಸಿಡಿಸಿ ಔಟಾದರು. ಕುಸಾಲ್ ಮೆಂಡೀಸ್ ಹೋರಾಟ ಮುಂದುವರಿಸಿದರು. ಇತ್ತ ಚಾರಿತ್ ಅಸಲಂಕಾ ಉತ್ತಮ ಸಾಥ್ ನೀಡಿದರು. ಬಹುಬೇಗನೆ 2 ವಿಕೆಟ್ ಕಳೆದುಕೊಂಡ ಲಂಕಾ ತಂಡಕ್ಕೆ ಮೆಂಡೀಸ್ ಹಾಗೂ ಅಸಲಂಕಾ ನೆರವಾದರು. ಆದರೆ ಚಾರಿತ್ ಅಸಲಂಕ 12 ರನ್ ಸಿಡಿಸಿ ಔಟಾದರು.ಹೋರಾಟ ನೀಡಿದ ಕುಸಾಲ್ ಮೆಂಡೀಸ್ 28 ರನ್ ಸಿಡಿಸಿ ನಿರ್ಗಮಿಸಿದರು. ಭಾನುಕ ರಾಜಪಕ್ಸ 10 ರನ್ ಸಿಡಿಸಿ ಔಟಾದರು. ಇತ್ತ ನಾಯಕ ದಸೂನ್ ಶನಕ ಕುಸಿದ ತಂಡಕ್ಕೆ ಆಸರೆಯಾದರು. ತಂಡದ ಜವಾಬ್ದಾರಿ ಹೊತ್ತುಕೊಂಡ ನಾಯಕ, ಹೋರಾಟ ಮುಂದುವರಿಸಿದರು. ನಾಯಕನಿಗೆ ವಾನಿಂಡು ಹಸರಂಗ ಜೊತೆಯಾದರು. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾ ಆತಂಕ ಹೆಚ್ಚಿಸಿತ್ತು. ಕೇವಲ 10 ಎಸೆತದಲ್ಲಿ 21 ರನ್ ಸಿಡಿಸಿದ ವಾನಿಂಡು ವಿಕೆಟ್ ಪತನ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಆದರೆ ದಸೂನ ಶನಕ ಬ್ಯಾಟಿಂಗ್ ಕ್ಷಣಕ್ಷಣಕ್ಕೂ ಪಂದ್ಯಕ್ಕೆ ರೋಚಕ ತಿರುವು ನೀಡಲು ಆರಂಭಿಸಿತು. ಚಮಿಕಾ ಕರುಣರತ್ನೆ ಜೊತೆ ಸೇರಿದ ದಸೂನ್ ಶನಕ ಹೋರಾಟ ಭಾರತದ ತಲೆನೋವು ಹೆಚ್ಚಿಸಿತು. 27 ಎಸೆತದಲ್ಲಿ 45 ರನ್ ಚಚ್ಚಿದ ದಸೂನ್ ಶನಕ ಭಾರತಕ್ಕೆ ಅಪಾಯದ ಸೂಚನೆ ನೀಡಿದರು. ಆದರೆ ಉಮ್ರಾನ್ ಮಲಿಕ್ ದಾಳಿಗೆ ಶನಕ ವಿಕೆಟ್ ಪತನಗೊಂಡಿತು. ಈ ವಿಕೆಟ್ ಪತನದೊಂದಿಗೆ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. ಇದರೊಂದಿಗೆ ಲಂಕಾ ಗೆಲುವಿಗೆ ಅಂತಿಮ 18 ಎಸೆತದಲ್ಲಿ 32 ರನ್ ಅವಶ್ಯಕತೆ ಇತ್ತು.