ಕೊಟ್ಟೂರು: ತಾಲೂಕಿನ ಪೊಲೀಸ್ ಠಾಣೆ ವತಿಯಿಂದ ಕಿತ್ತೂರು ಚನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ರಾಣಿ ಚನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಚಂದ್ರಶೇಖರ್ ಗೌಡ, ಅವರು, ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾದದ್ದು. ಅವರು ರಾಜ ಮನೆತನದವರಾಗಿದ್ದರಿಂದ ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿ ಬಳಸುವ ಪರಿಗಳ ಬಗ್ಗೆ ತರಬೇತಿ ಪಡೆದಿದ್ದರು. ಚನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ. ಹಾಗಾಗಿ ಅವರ ಜನ್ಮ ದಿನವನ್ನು ಕಿತ್ತೂರಿನ ವಿಜಯೋತ್ಸವ ದಿನ ಎಂದು ಆಚರಿಸಲಾಗುತ್ತಿದೆ’ ಎಂದರು.
‘ಚನ್ನಮ್ಮ ಅವರ ಜೀವನ ಮತ್ತು ಹೋರಾಟ ನಾಡಿನ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿದಾಯಕವಾಗಿದೆ. ಮಹಿಳೆಯರು ಕೂಡ ಸ್ವಾವಲಂಬಿಗಳಾಗಿ ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದರು.
ಈ ಸಂದರ್ಭದಲ್ಲಿ ಪಿಎಸ್ಐ ವಿಜಯ ಕೃಷ್ಣ,ಚಂದ್ರಶೇಖರ್ ಗೌಡ, ಕೊಟ್ಟೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಇದ್ದರು.
ವರದಿ : ವಿಷ್ಣು . ಎಲ್. ಕೊಟ್ಟುರು