Spread the love

ಕೊಟ್ಟೂರು:- ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಿ ಜೆ ನಾಗರಾಜ ಇವರು 1857 ರಲ್ಲಿ ನಡೆದ ಸಿಪಾಯಿ ದಂಗೆಗಿಂತ 33 ವರ್ಷಗಳ ಹಿಂದೆಯೇ ಬ್ರಿಟೀಷರ ವಿರುದ್ಧ ವೀರಗಚ್ಚೆಹಾಕಿ ಹೋರಾಡಿ,ಧಾರವಾಡದ ಕಲೆಕ್ಟರ್ ಆಗಿದ್ದ ಥ್ಯಾಕರೆಯನ್ನು ಹತ್ಯೆಗೈಯ್ದು ರುಂಡವನ್ನು ಕಡಿದು ಕಿತ್ತೂರಿನ ಹೆಬ್ಬಾಗಲಿಗೆ ಹಾಕಿ ಬ್ರಿಟಿಷರಿಗೆ ಭಾರತೀಯರ ಶಕ್ತಿಯನ್ನು ತೋರಿಸಿದ್ದಳು.ಕೈದಿಗಳಾಗಿ ಬಂದಿತರಾದ ಬ್ರಿಟಿಷ್ ಅಧಿಕಾರಿಗಳನ್ನು ಬಿಡಿಸಲು ಹಾಗೂ ಥ್ಯಾಕರೆಯ ಸಾವಿಗೆ ಸೇಡು ತೀರಿಸಿಕೊಳ್ಳಲು ಹೊಂಚುಹಾಕುತ್ತಿದ್ದ ಬ್ರಿಟಿಷರು ವೀರಾಗ್ರಣಿ ಈ ಮಹಿಳೆಯನ್ನು ನೇರವಾಗಿ ಯುದ್ಧದಲ್ಲಿ ಸೋಲಿಸಲು ಸಾಧ್ಯವಿಲ್ಲವೆಂದು ಮನಗಂಡು ಮಲ್ಲಪ್ಪಶೆಟ್ಟಿ ಹಾಗೂ ವೆಂಕಟಪ್ಪ ಎನ್ನುವ ಉಂಡ ಮನೆಗೆ ದ್ರೋಹಬಗೆಯುವ ಕುಯುಕ್ತಿ ವ್ಯಕ್ತಿಗಳಿಗೆ ಆಮಿಷ ತೋರಿಸಿ ಅವರ ಸಹಕಾರದಿಂದ ಚನ್ನಮ್ಮಾಜಿಯನ್ನು ಸೆರೆಹಿಡಿದರು.1824 ರಿಂದ 1829 ರವರೆಗೆ 5 ವರ್ಷಗಳ ಕಾಲ ಬೈಲಹೊಂಗಲ ಸೆರಮನೆಯಲ್ಲಿ ಬ್ರಿಟಿಷರ ಬಂಧನದಲ್ಲಿ ಕಾಲಕಳೆದ ಚನ್ನಮ್ಮ 1829 ಫೆಬ್ರವರಿ-2 ರಂದು ತನ್ನ 57ನೇ ವಯಸ್ಸಿನಲ್ಲಿ ಮೃತಪಟ್ಟಳು.ಬ್ರಿಟಿಷರ ವಿರುದ್ಧ ಹೋರಾಡಿದ ಕನ್ನಡದ ಅಪ್ರತಿಮಾ ಹೋರಾಟಗಾರ್ತಿಯ ಜ್ಯೋತಿ ನಂದಿತು.ಚನ್ನಮ್ಮಳ ಮಗನಂತಿದ್ದ ಸಂಗೊಳ್ಳಿ ರಾಯಣ್ಣನು ಕಿತ್ತೂರು ಸಂಸ್ಥಾನವನ್ನು ಸ್ವತಂತ್ರಗೊಳಿಸಬೇಕೆಂದು ಹೋರಾಡುತ್ತಿದ್ದ,ಲಿಂಗನಗೌಡ ಮತ್ತು ಬಾಳಪ್ಪಗೌಡರ ಬೆಂಬಲದಿಂದ ಬ್ರಿಟಿಷರ ಕೈಗೆ ಸೆರೆಸಿಕ್ಕು ಗಲ್ಲಿಗೇರಿ ಅಮರನಾದನು.ಇಂದು ಪ್ರತಿಯೊಂದು ಮನೆಯಲ್ಲೂ ಸಹ ಚನ್ನಮ್ಮನ ಶೌರ್ಯ-ಸಾಹಸದ ಕಥೆ ಹೇಳುವ ಮೂಲಕ ಹೆಣ್ಣುಮಕ್ಕಳನ್ನು ಸಬಲರನ್ನಾಗಿಸಬೇಕೆಂದು ನೀಡಿದ ಉಪನ್ಯಾಸವು ಎಲ್ಲರನ್ನು ಸ್ವಾತಂತ್ರ್ಯ ಹೋರಾಟದ ದಿನಕ್ಕೆ ಕರೆದುಕೊಂಡು ಹೋಯಿತು.ಕೊಟ್ಟೂರು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಚಾಪಿ ಚಂದ್ರಪ್ಪ ಇವರು ಚನ್ನಮ್ಮನ ಬಗ್ಗೆ ಮಾತನಾಡುತ್ತಾ, ಪಂಚಮಸಾಲಿ ಸಮಾಜದ ಬಹುಮುಖ್ಯ ಬೇಡಿಕೆಯಾದ 2ಎ ಮೀಸಲಾತಿ ಕೂಡಲೇ ನೀಡಬೇಕು. ಪಟ್ಟಣ ಪಂಚಾಯಿತಿಯಲ್ಲಿ ಈಗಾಗಲೇ ಅನುಮೋದನೆಗೊಂಡಿರುವ ಮರಿಕೊಟ್ಟೂರೇಶ್ವರ ದೇವಸ್ಥಾನದ ಹತ್ತಿರ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಹಾಗೂ ಪುತ್ಥಳಿ ಸ್ಥಾಪನೆಯಾಗಬೇಕು, ಪಂಚಮಸಾಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಕನಿಷ್ಠ 100*200 ಅಡಿ ವಿಸ್ತೀರ್ಣದ ನಿವೇಶವನ್ನು ನೀಡಬೇಕು ಎಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.
ಸಮಾಜದ ಮುಖಂಡರಾದ ಶಿವಶರಣ ದೇವರಮನಿ, ಪಟ್ಟಣ ಪಂಚಾಯಿತಿ ಸದಸ್ಯರಾದ ವೀಣಾ ವಿವೇಕಾನಂದಗೌಡ ಇವರು ಮಾತನಾಡಿದರು.ನಾಗರಾಜ ಉಪತಹಶೀಲ್ದಾರ್ ಅಧ್ಯಕ್ಷತೆ ವಹಿಸಿಕೊಂಡಿದ್ದು,ಸಮಾಜದವರು ನೀಡಿದ ಬೇಡಿಕೆಗಳನ್ನು ತಹಶೀಲ್ದಾರರ ಗಮನಕ್ಕೆ ತಂದು ಈಡೇರಿಸಲು ಶ್ರಮಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಹುಲ್ಲುಮನಿ ಮಲ್ಲೆಶಪ್ಪ,ಕೊಟ್ಟೂರಿನ ದಾವಣಗೆರೆ ಬಟ್ಟೆ ಅಂಗಡಿ ಮಾಲೀಕರಾದ ಬಿ.ಎಸ್ ಅಶೋಕ,ಮಂಜುನಾಥ ಗೌಡ್ರು, ಅಜ್ಜಪ್ಪ.ಸಿ. ಇಸಿಒ,ಶಿವಮೂರ್ತಿ ನಿವೃತ್ತ ಗ್ರಾ.ಲೆ,ಅನಿಲ್ ಹೊಸಮನಿ ಮಾಜಿ ಪ ಪಂ ಅಧ್ಯಕ್ಷರು,ತಾಲೂಕು ಶಿಕ್ಷಕರ ಸಂಘದ ಗೌರವ ಅಧ್ಯಕ್ಷರಾದ ಈಶ್ವರಪ್ಪ ತುರಕಾಣಿ,ಹಾಲಸ್ವಾಮಿ ಕಂದಾಯ ನಿರೀಕ್ಷಕರು,ಗ್ರಾಮ ಲೆಕ್ಕಿಗರಾದ ಮಲ್ಲೇಶ,ರಮೇಶ, ವಿಜಯಕುಮಾರ್ ಪ್ರ.ದ.ಸ. ಇದ್ದರು. ಶಿವಕುಮಾರ ಶಿಕ್ಷಕರು ಹಾಗೂ ಸಿ ಮ ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು.ಉಮಾದೇವಿ ಪ್ರಾರ್ಥಿಸಿದರು.

ವರದಿ : ವಿಷ್ಣು. ಎಲ್. ಕೊಟ್ಟುರು


Spread the love