Spread the love

ಬ್ಯಾಡ್ಮಿಂಟನ್‌ನಲ್ಲಿ ಉದಯೋನ್ಮುಖ ತಾರೆಯಾಗಿರುವ ಅರುಣಾಚಲದ 7 ವರ್ಷದ ಬಾಲಕ ಗೆಟಾ ಸೋರಾ, ಅರೆನಾ ಜೂನಿಯರ್ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ.

ಡಿಸೆಂಬರ್ 23 ರಂದು ಮಲೇಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ 9 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ರಾಷ್ಟ್ರಕ್ಕೆ ಗೌರವವನ್ನು ತಂದಿದ್ದಾರೆ.

 

ಮಲೇಷ್ಯಾದ ಎರಡನೇ ಶ್ರೇಯಾಂಕದ ಜರಿಲ್ ತೆಹ್ ಅವರನ್ನು 21-5 ಮತ್ತು 21-16 ರ ಎರಡು ಸೆಟ್‌ಗಳಲ್ಲಿ ಸೋರಾ ಸೋಲಿಸಿ ಚಾಂಪಿಯನ್‌ಶಿಪ್ ಗೆದ್ದರು.

ಅರುಣಾಚಲ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಬಮಾಂಗ್ ಟ್ಯಾಗೋ ಅವರು ಸೋರಾ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.

“ರಾಜ್ಯದ ಯುವ ಶಟ್ಲರ್‌ಗೆ ಇದು ಮಹತ್ವದ ಸಾಧನೆಯಾಗಿದೆ. ಅರುಣಾಚಲ ಸೋರಾ ಅವರಂತಹ ಅನೇಕ ನುರಿತ ಆಟಗಾರರನ್ನು ಹೊಂದಿದ್ದು, ಅವರು ಜಾಗತಿಕ ವೇದಿಕೆಯಲ್ಲಿ ಯಶಸ್ವಿಯಾಗುತ್ತಾರೆ. ಪೋಷಕರು ಮತ್ತು ಸರ್ಕಾರದ ಬೆಂಬಲ ಇದೀಗ ಅತ್ಯಗತ್ಯ” ಎಂದು ಟ್ಯಾಗೊ ಹೇಳಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಸೋರಾ ಎರಡು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ನವೆಂಬರ್‌ನಲ್ಲಿ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿರುವ ಬಾಂಥೋಂಗ್‌ಯಾರ್ಡ್ ಬ್ಯಾಡ್ಮಿಂಟನ್ ಶಾಲೆಯಲ್ಲಿ ನಡೆದ ಬಿಟಿವೈ-ಯೋನೆಕ್ಸ್-ಸಿಂಗ ಚಾಂಪಿಯನ್‌ಶಿಪ್ ಅನ್ನು 7 ವರ್ಷದ ಸೋರಾ ಗೆದ್ದರು

2022 ರ ಯೋನೆಕ್ಸ್-ಸಿಂಗ-ಬಿಟಿವೈ ಚಾಂಪಿಯನ್‌ಶಿಪ್‌ನಲ್ಲಿ ಸೋರಾ ಅಂಡರ್ 9 ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು.

2020 ರಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಪಿಎನ್‌ಬಿ ಮೆಟ್‌ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸೋರಾ ಚಿನ್ನ ಗೆದ್ದಿದ್ದಾರೆ.


Spread the love

By admin