Spread the love

ಹೌರಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಯತ್ನ ವಿಫಲಗೊಳಿಸಿದ ಜಾರ್ಖಂಡ್‌ ನಟಿಯೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜಾರ್ಖಂಡ್ ನಟಿ ರಿಯಾ ಕುಮಾರಿ ಅವರ ಪತಿ, ಚಲನಚಿತ್ರ ನಿರ್ಮಾಪಕ ಪ್ರಕಾಶ್ ಕುಮಾರ್ ಮತ್ತು ಅವರ ಎರಡು ವರ್ಷದ ಮಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ 16 ರ ಮೂಲಕ ಕಾರ್ ನಲ್ಲಿ ಕೋಲ್ಕತ್ತಾಗೆ ಹೋಗುತ್ತಿದ್ದರು.

ಬಗ್ನಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಶ್ರೇಖಾ ಬಳಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಕುಮಾರ್ ಕಾರ್ ನಿಲ್ಲಿಸಿದ ವೇಳೆ ಏಕಾಏಕಿ ಮೂವರು ದುಷ್ಕರ್ಮಿಗಳ ತಂಡ ಅವರ ಮೇಲೆ ದಾಳಿ ಮಾಡಿ, ಅವರ ವಸ್ತುಗಳನ್ನು ದೋಚಲು ಪ್ರಯತ್ನಿಸಿದೆ. ರಿಯಾ ಕುಮಾರಿ ಪತಿಯನ್ನು ರಕ್ಷಿಸಲು ಧಾವಿಸಿದಾಗ, ಅವರು ಆಕೆಗೆ ಗುಂಡು ಹಾರಿಸಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕಾಶ್ ಕುಮಾರ್ ತನ್ನ ಪತ್ನಿಯನ್ನು ವಾಹನಕ್ಕೆ ಕರೆದುಕೊಂಡು ಹೋಗಿ ಸುಮಾರು 3 ಕಿ.ಮೀ. ದೂರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಲ್ಗಾಚಿಯಾ-ಪಿರ್ತಾಲಾ ಹೆದ್ದಾರಿಯಲ್ಲಿ ಕೆಲವರಿಗೆ ನಡೆದ ಘಟನೆ ವಿವರಿಸಿ ಸಹಾಯ ಯಾಚಿಸಿದ್ದು, ಸ್ಥಳೀಯರು ಕುಮಾರ್ ಅವರ ಪತ್ನಿಯನ್ನು ಉಲುಬೇರಿಯಾದ ಎಸ್‌ಸಿಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲು ನೆರವಾಗಿದ್ದಾರೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ರಿಯಾ ಕುಮಾರಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಟನೆ ಕುರಿತು ತನಿಖೆ ನಡೆಸುತ್ತಿದ್ದು, ಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

By admin