ಅಡುಗೆ ಮಾಡಲು ಬಳಸುವ ಒಲೆಯ(ಸ್ಟೌ) ಬೆಂಕಿ ಇಡೀ ಮನೆಯನ್ನು ಸುಟ್ಟು ಭಸ್ಮ ಮಾಡಿದ್ದು, ದುರ್ಘಟನೆಯಲ್ಲಿ ಒಂದೇ ಕುಟುಂಬದ ಐವರು ಸಜೀವ ದಹನವಾದ ಘಟನೆ ಉತ್ತರಪ್ರದೇಶದ ಮೌ ಜಿಲ್ಲೆಯ ಶಹಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ರಾತ್ರಿ ಅಡುಗೆ ಮನೆಯ ಸ್ಟೌನಿಂದಾಗಿ ಹೊತ್ತಿಕೊಂಡ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಇದರಿಂದ ಮನೆಯೊಳಗಿದ್ದ ಮಹಿಳೆ, ಪುರುಷ, 3 ಅಪ್ರಾಪ್ತ ವಯಸ್ಸಿನ ಮಕ್ಕಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹೊರಬರಲಾಗದೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತಿಳಿದ ಬಳಿಕ ಅಗ್ನಿಶಾಮಕ ದಳ, ವೈದ್ಯಕೀಯ ಸಿಬ್ಬಂದಿಯೊಂದಿಗೆ ಪೊಲೀಸ್ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ.
ಬೆಂಕಿಯನ್ನು ನಂದಿಸಿ ಮೃತದೇಹಗಳನ್ನು ಮನೆಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರವಾಗಿ ತಲಾ 4 ಲಕ್ಷ ರೂಪಾಯಿ ನೆರವು ನೀಡುವುದಾಗಿ ಸರ್ಕಾರ ಘೋಷಿಸಿದೆ.