ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೆಲುವಿನ ಸರದಾರರು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಅರಮನೆ ಮೈದಾನದಲ್ಲಿ ಬಿಜೆಪಿಯ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಮಿತ್ ಶಾ ಅವರು ಹೋದಲ್ಲೆಲ್ಲ ಬಿಜೆಪಿ ಜಯಗಳಿಸಿದೆ.
ಆದರೆ, ಕಾಂಗ್ರೆಸ್ ನಾಯಕ ಹೋದಲೆಲ್ಲ ಆ ಪಕ್ಷವು ಸೋತಿದೆ. ಜನರ ಭಾಷೆಯಲ್ಲಿ ಹೇಳುವುದಾದರೆ ಮಠಾಶ್ ಆಗಿದೆ. ಗುಜರಾತ್ ಸೇರಿದಂತೆ ಕೆಲವು ಕಡೆ ರಾಹುಲ್ ಗಾಂಧಿ ಅವರು ತಲೆಯನ್ನೇ ಹಾಕಿಲ್ಲ. ರಾಹುಲ್ ಗಾಂಧಿ ಅವರು ಸೋಲಿನ ಸರದಾರರಾದರೆ,
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಗೆಲುವಿನ ಸರದಾರರು ಎಂದು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದಾರೆಂದರೆ ಯುದ್ಧ ಪ್ರಾರಂಭವಾದಂತೆ. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಪಂಚರತ್ನ, ಆ ರತ್ನ, ಈ ರತ್ನ ಎಂದೇ ಕುಳಿತುಕೊಂಡಿದ್ದಾರೆ. ಆದರೆ, ನಮ್ಮದು ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಭೆಗಳೂ ನಡೆದಿವೆ. ಈಗಿರುವ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ ಪಕ್ಷದ ೨೦ ಮಂದಿ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.