ಬೆಂಗಳೂರು: ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಹ ಸಂಸ್ಥಾಪಕರಾದ ಬೋಮನ್ ಇರಾನಿ ಅವರು ಯೆಜ್ಡಿ ಪದ ಮತ್ತು ಟ್ರೇಡ್ ಮಾರ್ಕ್ ಬಳಸದಂತೆ ಬೆಂಗಳೂರಿನ ಹೈಕೊರ್ಟ್ ಪೀಠ ನಿರ್ಬಂಧ ಹೇರಿದೆ. ಅಲ್ಲದೇ ಬೋಮನ್ ಇರಾನಿ ಅವರು ಐಡಿಯಲ್ ಜಾವಾ ಕಂಪೆನಿಗೆ ತಲಾ 10 ಲಕ್ಷ ರೂಗಳ ಪರಿಹಾರ ನೀಡಬೇಕು ಎಂದು ತಿಳಿಸಿದೆ.
ಬೋಮನ್ ಇರಾನಿ ಅವರಿಗೆ ಯೆಜ್ಡಿ ಹೆಸರನ್ನು ಬಳಸುವುದಕ್ಕೆ ಅನುಮತಿ ನೀಡಿರುವ ಟ್ರೇಡ್ ಮಾರ್ಕ್ ನೋಂದಣಿ ಪ್ರಾಧಿಕಾರದ ಕ್ರಮ ಪ್ರಶ್ನಿಸಿ,
ಯೆಜ್ಡಿ ಸಂಸ್ಥೆಯ ಅಧಿಕೃತ ಬರ್ಕಾಸ್ತುದಾರರ ಮತ್ತು ಐಡಿಯಲ್ ಜಾವಾ ನೌಕರರ ಸಂಘ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅಲ್ಲದೇ ಯೆಜ್ಡಿ ಸಂಸ್ಥೆ ಸುಸ್ತಿದಾರ ಸಂಸ್ಥೆಯಾಗಿರುವ ಸಂದರ್ಭದಲ್ಲಿ ಅದರ ಹೆಸರಿನಲ್ಲಿ ಮತ್ತೊಂದು ಸಂಸ್ಥೆ ನೋಂದಣಿ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.