Spread the love

 ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಾಲಿವುಡ್ ನಟ, ಅವೇಂಜರ್ಸ್ ಖ್ಯಾತಿಯ ಜೆರ್ಮಿ ರನ್ನರ್ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ನಟನ ಕುಟುಂಬಸ್ಥರು ತಿಳಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ, ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಅವೇಂಜರ್ಸ್ ಸರಣಿಯಲ್ಲಿ ಹ್ಯಾಕ್ ಐ ಪಾತ್ರ ನಿರ್ವಹಿಸುತ್ತಿದ್ದ ಜೆರ್ಮಿ ದಟ್ಟ ಮಂಜು ಮಧ್ಯ ನಿನ್ನೆ ಕಾರು ಚಲಾಯಿಸುತ್ತಿರುವಾಗ ಅಪಘಾತಕ್ಕೀಡಾಗಿದ್ದರು. ಅಪಘಾತವಾದ ತಕ್ಷಣವೇ ಏರ್ ಲಿಫ್ಟ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜೆರ್ಮಿ ವಾಸಿಸುತ್ತಿರುವ ನೆವಾಡಾದಲ್ಲಿ ಹಲವು ದಿನಗಳಿಂದ ಹಿಮಪಾತವಾಗುತ್ತಿದೆ. ಇಡೀ ಪ್ರದೇಶದ ಹಿಮದಿಂದ ಮುಚ್ಚಿದೆ. ಅಲ್ಲದೇ ವಿದ್ಯುತ್ ಕೂಡ ಕೈಕೊಟ್ಟಿದೆ. ಸಂಚಾರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಜೆರ್ಮಿ ಕಾರು ಚಲಾಯಿಸಿದ್ದಾರೆ. ದಟ್ಟ ಮಂಜು ಇದ್ದ ಕಾರಣಕ್ಕಾಗಿ ರಸ್ತೆ ಕಾಣದೇ ಅಪಘಾತ ನಡೆದಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ತೀವ್ರ ಗಾಯಗೊಂಡಿದ್ದ ಜೆರ್ಮಿ ಅವರನ್ನು ರಸ್ತೆ ಸಂಚಾರಕ್ಕೆ ಅನುಕೂಲ ಇಲ್ಲದ ಕಾರಣದಿಂದಾಗಿ ಏರ್ ಲಿಫ್ಟ್ ಮಾಡಲಾಗಿದೆ. ಸ್ಥಿತಿ ಗಂಭೀರವಾಗಿರುವುದರಿಂದ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರಂತೆ ವೈದ್ಯರು. ಹಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಇವರು, ಆಸ್ಕರ್ ಪ್ರಶಸ್ತಿ ವಿಜೇತ ‘ಹರ್ಟ್ ಲಾಕರ್’ ಸಿನಿಮಾದಲ್ಲೂ ನಟಿಸಿದ್ದಾರೆ.


Spread the love

By admin