ಟಾಲಿವುಡ್ ಪ್ರಿನ್ಸ್ ನಟ ಮಹೇಶ್ ಬಾಬು ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಅವರು ತಮ್ಮದೇ ಆದ ಶೈಲಿಯಲ್ಲಿ ಕೆಲಸ ಮಾಡುತ್ತಾರೆ. ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಹೆಚ್ಚು ಗ್ಯಾಪ್ ನೀಡುತ್ತಿದ್ದಾರೆ.
ಆದರೆ ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ.
ಮಹೇಶ್ ಬಾಬು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಬೇಕು ಮತ್ತು ಜಾಸ್ತಿ ಗ್ಯಾಪ್ ಕೊಡಬಾರದು ಎಂಬುದು ಅಭಿಮಾನಿಗಳ ಬಯಕೆ. ಅದನ್ನು ಫ್ಯಾನ್ಸ್ ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ‘ತಮಿಳು ನಟ ದಳಪತಿ ವಿಜಯ್ ಅವರನ್ನು ನೋಡಿ ಮಹೇಶ್ ಬಾಬು ಕಲಿಯಬೇಕು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ದಳಪತಿ ವಿಜಯ್ ‘ವಾರಿಸು’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಚಿತ್ರ ಜನವರಿ 12ರಂದು ರಿಲೀಸ್ ಆಗಲಿದೆ. ಆ ಚಿತ್ರದ ಪ್ರಮೋಷನ್ ಕೆಲಸಗಳು ನಡೆಯುತ್ತಿರುವಾಗಲೇ ವಿಜಯ್ ಅವರು ತಮ್ಮ ಹೊಸ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಕಳೆದ ಸೋಮವಾರವಷ್ಟೇ ಆ ಸಿನಿಮಾ ಸೆಟ್ಟೇರಿದೆ.
ಮಹೇಶ್ ಬಾಬು ಕೂಡ ವಿಜಯ್ ಅಂತೆ ಬೇಗನೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂಬುದು ಅಭಿಮಾನಿಗಳ ಬಯಕೆ. ಅವರು ನಟಿಸಿದ ‘ಸರ್ಕಾರು ವಾರಿ ಪಾಟ’ ಚಿತ್ರ ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆ ಆಯಿತು. ಅಂದಿನಿಂದ ಇಂದಿನ ತನಕ ಅವರು ಹೊಸ ಚಿತ್ರದ ಶೂಟಿಂಗ್ ಆರಂಭಿಸಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.