Spread the love

ಬೆಂಗಳೂರು: ಒಡೆದು ಆಳುವ ನೀತಿ ಅನುಸರಿಸಿ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಸಿದ್ದರಾಮಯ್ಯ ಇಳಿದಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಕಿಡಿಕಾರಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷ ಹಳೇ ಮೈಸೂರು ಭಾಗದ ಅಭಿವೃದ್ಧಿಗಾಗಿ ಏನೂ ಮಾಡಲಿಲ್ಲ.

ಸ್ವತಃ ಮುಖ್ಯಮಂತ್ರಿಯಾಗಿದ್ದ ಈ ಭಾಗದವರಾದ ಸಿದ್ದರಾಮಯ್ಯನವರು ಕೂಡ ಅಭಿವೃದ್ಧಿ ಕಡೆಗಣಿಸಿ ಒಡೆದಾಳುವ ನೀತಿ ಅನುಸರಿಸಿ ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಿಳಿದು ಬಿಟ್ಟರು. ಆದರೆ ಜನ ಇದಾವುದನ್ನೂ ಮರೆಯದೇ ಕಳೆದ ಚುನಾವಣೆಯಲ್ಲಿ ಪಾಠ ಕಲಿಸಿದರು ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

2018ರ ಚುನಾವಣೆಯಲ್ಲಿ ಸೋಲು ಖಚಿತ ಎಂದು ಅರಿವಾದಾಗ ಸಿದ್ದರಾಮಯ್ಯನವರು ತಮ್ಮನ್ನು ನಂಬಿದವರನ್ನು ಅನಾಥರನ್ನಾಗಿಸಿ ಬಾದಾಮಿಗೆ ಓಡಿಹೋದರು. ಅಲ್ಲಿಂದ ಮತ್ತೆ ಇಲ್ಲಿಗೆ ಬರುವ ಯೋಚನೆ ಮಾಡುತ್ತಿದ್ದಾರೆ. ಆದರೆ ಒಡೆಯರ್‌ ಅವರಿಗೆ ಅಗೌರವದ ಏಕವಚನದ ಪದ ಬಳಸಿದವರನ್ನು ಈ ಭಾಗದ ಸುಸಂಸ್ಕೃತ ಜನರು ಶಾಶ್ವತವಾಗಿ ತಿರಸ್ಕರಿಸಿದ್ದಾರೆ. ಈಗ ಮತ್ತೆ ಸಿದ್ದರಾಮಯ್ಯನವರು ಓಡಲೆಂದು ನಮ್ಮ ಸರ್ಕಾರ ರಾಜ್ಯದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸುತ್ತಿದೆ. ಆದರೆ ಈಗ ಬನ್ನೂರು-ಮಳವಳ್ಳಿ ಮಾರ್ಗದಲ್ಲಿ ಓಡಲು ಕನಕಪುರದಲ್ಲಿ ಬಂಡೆ ಅಡ್ಡಲಾಗಿದೆ. ಸಿಎಂ ಆಗಿದ್ದಾಗ ನಿದ್ದೆ ಮಾಡಿ, ಈಗ ಚುನಾವಣೆಯೆಂದು ತಟ್ಟನೆ ಎಚ್ಚರಗೊಂಡು ಈ ಭಾಗದ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಕಿಡಿಕಾರಿದೆ.


Spread the love