Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.

ಸುಬ್ರಹ್ಮಣ್ಯದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿ, ಆಕೆಗೆ ಚಾಕೊಲೇಟ್ ನೀಡಿದ ಯುವಕನನ್ನು ಬಲವಂತವಾಗಿ ಜೀಪಿನಲ್ಲಿ ಕರೆದುಕೊಂಡು ಹೋದ ಗುಂಪು ಕುಮಾರಧಾರ ಜಂಕ್ಷನ್ ಸಮೀಪ ಹಳೆಯ ಕಟ್ಟಡದಲ್ಲಿ ಹಲ್ಲೆ ನಡೆಸಿದೆ.

 

ಸುಳ್ಯ ತಾಲೂಕು ಸಂಪಾಜೆ ಕಲ್ಲುಗುಂಡಿಯ ಹಫೀದ್(20) ಹಲ್ಲೆಗೊಳಗಾದ ಯುವಕ. ಕಳೆದ ವರ್ಷ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ವಿದ್ಯಾರ್ಥಿನಿಯನ್ನು ಸುಬ್ರಹ್ಮಣ್ಯದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಬಳಿ ಎರಡು ಮೂರು ಸಲ ಭೇಟಿಯಾಗಿ ಮಾತನಾಡಿದ್ದ. ಗುರುವಾರ ಸಂಜೆ ಕಾಲೇಜು ಮುಗಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ವಿದ್ಯಾರ್ಥಿನಿಯನ್ನು ಮಾತನಾಡಿಸಿ ಚಾಕೊಲೇಟ್ ಕೊಟ್ಟಿದ್ದಾನೆ. ಈ ವೇಳೆ ಆತನಿಗೆ ಪರಿಚಯವಿಲ್ಲದ ಮೂರ್ನಾಲ್ಕು ಮಂದಿ ಬಲವಂತವಾಗಿ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಐದಾರು ಜನ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ದೊಣ್ಣೆ, ಕೋಲಿನಿಂದ ಹಲ್ಲೆ ಮಾಡಿದ್ದು ಒಬ್ಬ ಚಾಕುವಿನಿಂದ ಇರಿಯಲು ಮುಂದಾದಾಗ ಕೆಲವರು ತಡೆದಿದ್ದಾರೆ ಎಂದು ಹಫೀದ್ ದೂರು ನೀಡಿದ್ದಾನೆ.

ಹಫೀದ್ ವಿರುದ್ಧ ವಿದ್ಯಾರ್ಥಿನಿಯ ತಾಯಿ ಕೂಡ ದೂರು ನೀಡಿದ್ದಾರೆ. ಮಗಳು ಕಾಲೇಜಿಗೆ ಹೋಗಿ ಬರುವಾಗ ಪ್ರೀತಿಸುವಂತೆ ಹಫೀದ್ ಪೀಡಿಸುತ್ತಿದ್ದ. ಆಕೆಯ ಮೊಬೈಲ್ ನಂಬರ್ ಕೇಳಿದ್ದ. ಆಕೆ ನಿರಾಕರಿಸಿದಾಗ ಕೈಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ. ಆತನಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದ ಮಗಳು ವಿಚಲಿತಳಾಗಿದ್ದಳು. ಆಕೆಯನ್ನು ವಿಚಾರಿಸಿದಾಗ ತಡವಾಗಿ ಈ ಬಗ್ಗೆ ಮಾಹಿತಿ ನೀಡಿರುವುದಾಗಿ ವಿದ್ಯಾರ್ಥಿನಿಯ ತಾಯಿ ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.


Spread the love

By admin