Spread the love

ಬೆಂಗಳೂರು: ಅಗ್ರಹಾರ ದಾಸರಹಳ್ಳಿ ವಾರ್ಡ್ ವ್ಯಾಪ್ತಿಯ ಎಂ.ಸಿ‌. ಬಡಾವಣೆಯಲ್ಲಿ ನಿರ್ಮಾಣವಾಗಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣೆಗೆ ಆಗಮಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಪ್ಪಿಕೊಂಡಿದ್ದು, ಜನವರಿ 31 ರಂದು ಯುಪಿ ಸಿಎಂ ಬೆಂಗಳೂರಿಗೆ ಆಗಮಿಸಿ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

 

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡ್ ನಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆದಿಚುಂಚನಗಿರಿ ಪೀಠದ ನಿರ್ಮಲಾನಂದ ಸ್ವಾಮೀಜಿ, ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಪರಿವೀಕ್ಷಣೆ ನಡೆಸಿದರು. 4 ಅಂತಸ್ತಿನ ಕಟ್ಟಡವನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 7 ಆಪರೇಷನ್ ಥಿಯೇಟರ್, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಕಿಶೋರ ಸ್ವಾಸ್ಥ್ಯ ಕೇಂದ್ರ, ಹೃದ್ರೋಗ ತಪಾಸಣೆ (ಕಾರ್ಡಿಯಾಲಜಿ), ಫಿಜಿಯೋಥೆರಪಿ, ದಂತ ಒಪಿಡಿ, ನೇತ್ರ, ಕಿವಿ, ಮೂಗು, ಗಂಟಲು ತಪಾಸಣೆ, ಮೂಳೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಟೆಲಿ ರೋಬೋಟ್ ಮತ್ತು ಟೆಲಿ ಮೆಡಿಸಿನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇಡೀ ಆಸ್ಪತ್ರೆಯನ್ನು ಸಂಪೂರ್ಣವಾಗಿ ವೀಕ್ಷಿಸಿದ ನಿರ್ಮಲಾನಂದ ಶ್ರೀಗಳು ಜನಸಾಮಾನ್ಯರಿಗಾಗಿ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.


Spread the love

By admin