Spread the love

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತವೆಂದು ಗುರುತಿಸಲಾದ ಪಟ್ಟೆ ತಲೆ ಹೆಬ್ಬಾತುಗಳನ್ನು ಕೂಡಿಹಾಕಿ ಸಾಕಿದ ಆರೋಪದ ಮೇಲೆ ನಟ ದರ್ಶನ್, ಫಾರ್ಮ್ ಹೌಸ್ ಒಡತಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

 

ಶುಕ್ರವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದಾರೆ. ಮಂಗೋಲಿಯಾ ಮೂಲದ ವಲಸೆ ಹಕ್ಕಿಗಳಾದ 4 ಪಟ್ಟೆ ತಲೆ ಹೆಬ್ಬಾತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಲ್ಕು ವಿದೇಶಿ ಹಕ್ಕಿಗಳನ್ನು ರಕ್ಷಣೆ ಮಾಡಲಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಇವು ವಿರಳವಾದ ಪಕ್ಷಿಗಳಾಗಿದ್ದು, ಖಜಕಿಸ್ತಾನ, ಮಂಗೋಲಿಯಾ ಭಾಗದಲ್ಲಿ ಕಂಡುಬರುತ್ತವೆ. ಆ ಪ್ರದೇಶಗಳಲ್ಲಿ ಶೀತದ ವಾತಾವರಣ ಹೆಚ್ಚಿದಾಗ ರಕ್ಷಣೆಗಾಗಿ ಹಿಮಾಲಯ ದಾಟಿ ದಕ್ಷಿಣ ರಾಜ್ಯಗಳಿಗೆ ಬರುತ್ತವೆ. ಇವುಗಳನ್ನು ಸೆರೆಹಿಡಿದು ಸಾಕುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.


Spread the love

By admin