Spread the love

ಬೆಂಗಳೂರು: ಕದ್ದ ಚಿನ್ನವನ್ನ ಖರೀದಿಸುತ್ತಿದ್ದ ಆರೋಪದ ಮೇಲೆ ಗಿರವಿ ಅಂಗಡಿ ಮಾಲೀಕನನ್ನು ವಿವೇಕನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಡಿಜೆ ಹಳ್ಳಿಯ ಪಿಳ್ಳಪ್ಪ ಗಾರ್ಡನ್​ನಲ್ಲಿರುವ ಪೂಜಾ ಬ್ಯಾಂಕರ್ಸ್ ಮಾಲೀಕ ಭವರ್ ಲಾಲ್ ಪೊಲೀಸರ ಅತಿಥಿಯಾದ ವ್ಯಕ್ತಿ. ಮನೆಗಳ್ಳರಿಂದ ಕದ್ದ ಚಿನ್ನಾಭರಣವನ್ನು ಕಡಿಮೆ ಬೆಲೆಗೆ ಸ್ವೀಕರಿಸುತ್ತಿದ್ದ ಭವರ್ ಲಾಲ್ ಅವರು ಪೊಲೀಸರ ನೋಟಿಸ್​ಗೆ ಉತ್ತರಿಸದೇ ನಾಟಕವಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚಿಗೆ ವಿವೇಕ ನಗರ ಠಾಣೆಯ ಪೊಲೀಸರು ಶ್ರೀನಿವಾಸ ಅಲಿಯಾಸ್ ಅಪ್ಪು ಎಂಬ ಮನೆಗಳ್ಳತನದ ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿ ಶ್ರೀನಿವಾಸನು ಅಶೋಕನಗರ, ಜೆ ಬಿ ನಗರ, ಹೆಚ್‌ಎಎಲ್ ಸೇರಿದಂತೆ ಹಲವು ಭಾಗದಲ್ಲಿ ಎಂಟಕ್ಕೂ ಹೆಚ್ಚು ಮನೆಗಳನ್ನು ದೋಚಿ ಕದ್ದ ಚಿನ್ನಾಭರಣವನ್ನ ಹತ್ತಾರು ಕಡೆ ಅಡವಿಟ್ಟಿರೋದಾಗಿ ಬಾಯ್ಬಿಟ್ಟಿದ್ದನಂತೆ.

ಅದರಂತೆ ತನಿಖೆ ಆರಂಭಿಸಿದ ಪೊಲೀಸರು ಗಿರವಿ ಅಂಗಡಿ ಮಾಲೀಕ ಈ ಭವರ್ ಲಾಲ್​ ಅವರಿಗೆ ನೋಟಿಸ್ ನೀಡಿದರೆ ಉತ್ತರಿಸುತ್ತಿರಲಿಲ್ಲ. ಮಹಜರು ಕಾಪಿ ಹಿಡಿದು ಪೊಲೀಸರು ಅಂಗಡಿ ಬಳಿ ಬಂದರೆ ಉಡಾಫೆ ಉತ್ತರ ನೀಡುತ್ತಿದ್ದರು. ವಿಧಿಯಿರದೇ ವಿವೇಕನಗರ ಠಾಣಾ ಪೊಲೀಸರು ಸದ್ಯ ಗಿರವಿ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಗಿರವಿ ಅಂಗಡಿಗೆ ಬರುತ್ತಿದ್ದಂತೆ ಭವರ್​ ಲಾಲ್​ ಪತ್ನಿ, ಮಕ್ಕಳು ತಮ್ಮ ತಂದೆಯನ್ನು ವಶಕ್ಕೆ ಪಡೆಯದಂತೆ ಸ್ಥಳದಲ್ಲಿ ಪೊಲೀಸರಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ.


Spread the love

By admin