Spread the love

ಬೆಂಗಳೂರು: ಚುನಾವಣೆಗೆ ಕಾಂಗ್ರೆಸ್ ಎಲ್ಲ ತಯಾರಿ ಮಾಡಿಕೊಂಡಿದೆ. ಟಿಕೆಟ್ ಹಂಚಿಕೆ ಬಗ್ಗೆ ಅಭಿಪ್ರಾಯ ತಿಳಿಸಿದ್ದೇವೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕರು‌ ಕಮಿಟಿ ಮಾಡುತ್ತಾರೆ. ಆದಷ್ಟು ಬೇಗ ಪರಿಶೀಲನಾ ಸಮಿತಿ‌ ಮಾಡಲು ಹೇಳಿದ್ದೇವೆ. ಅತಿ ಶೀಘ್ರದಲ್ಲಿ ಕಾಂಗ್ರೆಸ್​ನ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದರು.

ಬಿಜೆಪಿಯವರು ಜನರನ್ನು ಭ್ರಮೆಯಲ್ಲಿ ಇಟ್ಟಿದ್ದಾರೆ. ಜನರು ಕೂಡ ಬದಲಾಗಿದ್ದಾರೆ. ಈ ಸರ್ಕಾರ ತೊಲಗಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಹಾಗೂ ಕೇಂದ್ರ ನಾಯಕರು ಸರ್ವೇ ಮಾಡಿಸಿದ್ದಾರೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ. ರವಿ ಹೇಳಿಕೆ ನೋಡಿದರೆ ಕೋಮುಗಲಭೆ ಮುನ್ಸೂಚನೆ ನೀಡಿದಂತಿದೆ. ಕರಾವಳಿ ಭಾಗದಲ್ಲಿ ಅಶಾಂತಿ‌ ಮೂಡಿಸಲು‌ ಹೊರಟಿದ್ದಾರೆ. ಪಾಕಿಸ್ತಾನ ಬಗ್ಗೆ ಹೇಳಿಕೆ ನೀಡಿದ್ದಾರೆ. ಪದೆ ಪದೆ ಪಾಕಿಸ್ತಾನ ಹೆಸರನ್ನು ಎಳೆದು ತರುತ್ತಿದ್ದಾರೆ. ಹಾಗಾಗಿ ಟಿ ರವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಾಕಿಸ್ತಾನದ ಹೆಸರಲ್ಲಿ ರಾಜಕೀಯ ‌ಮಾಡಬೇಡಿ: ಬಿಜೆಪಿ ನಾಯಕರು‌ ನೀಚರು, ಯಾವ ಹಂತಕ್ಕೆ ಬೇಕಾದರು ಹೋಗುತ್ತಾರೆ. ಜನರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಭ್ರಷ್ಟಾಚಾರ ವ್ಯವಸ್ಥೆ ಅವರಿಗೆ ಕಾಣಿಸುತ್ತಿಲ್ಲವೇ? ಪದೆ ಪದೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಈಗಾಗಲೇ ಹಗರಣಗಳು ಹೊರಗೆ ಬಂದಿವೆ. ಪಾಕಿಸ್ತಾನದ ಹೆಸರಲ್ಲಿ ರಾಜಕೀಯ ‌ಮಾಡಬೇಡಿ. ಡಿ ಕೆ ಶಿವಕುಮಾರ್ ಹೆಸರು ಹೇಳಲು ಯೋಗ್ಯತೆ ಇಲ್ಲ ಎಂದು ಸಿ ಟಿ ರವಿ ವಿರುದ್ಧ ಡಿ‌ ಕೆ ಸುರೇಶ್ ವಾಗ್ದಾಳಿ ನಡೆಸಿದರು.

ಅಭ್ಯರ್ಥಿಗಳ ಆಪರೇಷನ್ ಕಮಲ ವಿಚಾರ ಮಾತನಾಡಿ, ಆಪರೇಷನ್ ವಿಚಾರಕ್ಕೆ ಬಿಜೆಪಿಯವರು ಫೇಮಸ್ ಆಗಿದ್ದಾರೆ. ಇವತ್ತು ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಕೇಂದ್ರ ಸರ್ಕಾರ ಅದಾನಿಗೆ ಬೆಂಬಲ ಕೊಟ್ಟಿತ್ತು. ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಹತ್ತು ಲಕ್ಷ ಕೋಟಿ ರೂಪಾಯಿ ನಷ್ಟ ಆಗಿದೆ. ಇದಕ್ಕೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. ಮುಂದೆ ಆರ್ಥಿಕ ಪರಿಸ್ಥಿತಿ ಜನರ ಮೇಲೆ ಪರಿಣಾಮ ಬೀರುತ್ತೆ ಎಂದು ಸಂಸದ ಡಿ ಕೆ ಸುರೇಶ್​ ಹೇಳಿದ್ದಾರೆ.


Spread the love

By admin