ಬೆಂಗಳೂರು: ಹಣದ ವಿಚಾರವಾಗಿ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ವ್ಯಕ್ತಿಯೋರ್ವ ತನ್ನ ಪ್ರಾಣ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.
25 ವರ್ಷದ ಶರತ್ ಕುಮಾರ್ ಕೊಲೆಯಾದ ಯುವಕ.
ಆರೋಪಿ ಲೋಕೇಶ್ ಹಾಗೂ ಶರತ್ ಕುಮಾರ್ ಇಬ್ಬರೂ ಸ್ನೇಹಿತರಾಗಿದ್ದರು. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಆರಂಭದಲ್ಲಿ ಶರತ್ ಕುಮಾರ್, ಲೋಕೇಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ.
ಈ ವೇಳೆ ಲೋಕೇಶ್ ತಕ್ಷಣ ಚಾಕುವನ್ನು ಕಸಿದುಕೊಂಡು ಶರತ್ ಕುಮಾರ್ ಗೆ ಅದೇ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಶರತ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.