Spread the love

ಕೀವ್‌: ಉಕ್ರೇನ್‌ ಮೇಲೆ ಹತ್ತು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾಕ್ಕೆ ಆಗಿರುವ ಹಿನ್ನಡೆ ಸರಿದೂಗಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಚೀನಾ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ವ್ಲಾಡಿಮಿರ್ ಪುಟಿನ್ ಮತ್ತು ಷಿ ಜಿನ್‌ಪಿಂಗ್ ಪ್ರತಿಜ್ಞೆ ಮಾಡಿದ್ದಾರೆ.

 

ಇದರ ಬೆನ್ನಲ್ಲೇ ಉಕ್ರೇನ್‌ ಮೇಲೆ ಮತ್ತೊಂದು ಸುತ್ತಿನ ಭಾರಿ ಕ್ಷಿಪಣಿ, ಬಾಂಬ್‌ ಹಾಗೂ ಡ್ರೋನ್‌ಗಳ ದಾಳಿ ನಡೆಸಲು ರಷ್ಯಾ ಮುಂದಾಗಿದೆ ಎನ್ನಲಾಗುತ್ತಿದೆ.

ಪುಟಿನ್‌ ಮತ್ತು ಜಿನ್‌ಪಿಂಗ್‌ ಅವರು ವರ್ಚುವಲ್‌ ಮೂಲಕ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಮಾತುಕತೆಯಲ್ಲಿ ಉಕ್ರೇನ್‌ ಯುದ್ಧದ ಬಗ್ಗೆ ನೇರ ಉಲ್ಲೇಖ ಮಾಡಲಿಲ್ಲ. ಆದರೆ, ಉಭಯ ರಾಷ್ಟ್ರಗಳು ವ್ಯಾಖ್ಯಾನಿಸುತ್ತಿರುವ ‘ಭೌಗೋಳಿಕ ರಾಜಕೀಯ ಉದ್ವಿಗ್ನತೆ’ ಮತ್ತು ‘ಅಂತರರಾಷ್ಟ್ರೀಯ ಕಠಿಣ ಪರಿಸ್ಥಿತಿ’ ವೇಳೆ ದ್ವಿಪಕ್ಷೀಯ ಸಹಕಾರ ವೃದ್ಧಿಯ ಪ್ರತಿಜ್ಞೆ ಮತ್ತು ಸಂಬಂಧ ಬಲಪಡಿಸುವಿಕೆ ತೀರ್ಮಾನವನ್ನು ಉಭಯ ನಾಯಕರು ಪ್ರಶಂಸಿಸಿದರು.

‘ಉಲ್ಬಣಿಸುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ರಷ್ಯಾ- ಚೀನಾ ಕಾರ್ಯತಂತ್ರದ ಸಹಭಾಗಿತ್ವವು ಸ್ಥಿರವಾಗಿ ಬೆಳೆಯುತ್ತಿರುವುದು ಮಹತ್ವದ್ಧಾಗಿದೆ’ ಎಂದು ಪುಟಿನ್ ಹೇಳಿದ್ದಾರೆ.

ಜಿನ್‌ಪಿಂಗ್‌ ಜತೆಗಿನ ವರ್ಚುವಲ್‌ ಮಾತುಕತೆಯಲ್ಲಿ ಪುಟಿನ್‌, ಸೇನೆಗಳ ಸಹಕಾರವು ನಮ್ಮ ನಡುವಿನ ಸಂಬಂಧದಲ್ಲಿ ‘ವಿಶೇಷ ಸ್ಥಾನ’ ಹೊಂದಿದೆ. ಉಭಯ ರಾಷ್ಟ್ರಗಳ ಸಶಸ್ತ್ರ ಪಡೆಗಳ ನಡುವಿನ ಸಹಕಾರ ಬಲಪಡಿಸುವ ಗುರಿಯನ್ನು ರಷ್ಯಾ ಹೊಂದಿದೆ. ನಮ್ಮ ಸ್ನೇಹದ ವಿಚಾರದಲ್ಲಿ ಚೀನಾಕ್ಕೆ ಯಾವುದೇ ಮಿತಿ ಇರುವುದಿಲ್ಲ’ ಎಂದು ಹೇಳಿದರು.


Spread the love

By admin